ನೃತ್ಯ 

	ನೃತ್ಯ ಕುಣಿತಕ್ಕೆ ಇರುವ ಇನ್ನೊಂದು ಹೆಸರು (ಡಾನ್ಸ್). ಶಾಸ್ತ್ರ ದೃಷ್ಟಿಯಿಂದ ನೋಡಿದಲ್ಲಿ, ಹಿನ್ನೆಲೆಯ ಗಾಯನಕ್ಕೆ ಅನುಗುಣವಾಗಿ ಕೈಕಾಲುಗಳನ್ನು, ದೇಹದ ಇತರ ಭಾಗಗಳನ್ನು ಮಣಿಸಿ ಲಯಬದ್ಧವಾಗಿ ನಡೆಸುವ ಕುಣಿತ ಮಾತ್ರ ನೃತ್ಯ ಎನಿಸಿಕೊಳ್ಳುತ್ತದೆ. ಹಿನ್ನೆಲೆಯ ಗಾಯನ ಹಾಡುಗಾರಿಕೆ ಆಗಿರಬಹುದು. ಇಲ್ಲವೇ ಕೇವಲ ವಾದ್ಯ ಸಂಗೀತ ಆಗಿರಬಹುದು. ತಾಳವೇ ನೃತ್ಯದ ಜೀವಾಳವಾದ್ದರಿಂದ ಏನಿಲ್ಲದಿದ್ದರೂ ಕೈಚಪ್ಪಾಳೆಗೆ ಅನುಗುಣವಾಗಿ ನರ್ತಿಸುವುದೂ ಉಂಟು. ಒಬ್ಬನೇ ಕುಣಿಯುವುದು ಎಷ್ಟು ಸಹಜವೋ ಇಡಿಯ ಗುಂಪು ಕುಣಿಯುವುದೂ ಅಷ್ಟೇ ಸಹಜ. ಸಹಜ ಸ್ಫೂರ್ತಿಯಿಂದ ಸಮಯ ಸ್ಫೂರ್ತಿಯಿಂದ ಕುಣಿಯುವುದುಂಟು. ಇಲ್ಲವೇ ಮೊದಲೇ ನಿಷ್ಕರ್ಷಿತವಾದ ರೀತಿಯಲ್ಲಿ ಕುಣಿಯುವುದುಂಟು. ಅದಕ್ಕೊಂದು ಸಂಪ್ರದಾಯ ಏರ್ಪಡುವುದೂ ಉಂಟು. ಇತರ ಎಲ್ಲ ಕಲೆಗಳಂತೆ ಕುಣಿತಕ್ಕೂ ಮೂಲ ಮತಧರ್ಮದಲ್ಲಿದೆ. ಇಲ್ಲವೇ ಆಯಾ ಜನರ ಮಾಯ ಮಾಟಗಳಲ್ಲದು ಹುದುಗಿದೆ. ಅವರವರ ನಂಬಿಕೆಯಲ್ಲಡಗಿದೆ. ಆದರೂ ಎಲ್ಲಾ ಕಲೆಗಳಿಗೂ ಆನಂದವೇ ಗುರಿಯಾಗಿರುವಂತೆ ಕುಣಿತಕ್ಕೂ ಆನಂದವೇ ಗುರಿ ಎಂಬುದೂ ಅಷ್ಟೇ ನಿಜವಾದ ಮಾತು. ಸುಪ್ತವಾಗಿರುವ ರಾಗಭಾವಗಳ ಅಭಿವ್ಯಕ್ತಿ ಕುಣಿತದ ಮೂಲೋದ್ದೇಶ. ಆದರಿಂದ ವ್ಯಕ್ತಿಗೆ ಆನಂದವಾಗುವಂತೆ ಕುಣಿತವನ್ನು ನೋಡುವ ಪ್ರೇಕ್ಷಕರಿಗೂ ಆನಂದ ಒದಗುತ್ತದೆ. ಮಾನವ ಮಾತನಾಡುವುದನ್ನು ಕಲಿಯುವುದಕ್ಕೆ ಎಷ್ಟೋ ಮೊದಲೇ ಕುಣಿಯುವುದನ್ನು, ಹಾಡುವುದನ್ನು, ವಾದ್ಯ ನುಡಿಸುವುದನ್ನು ಕಲಿತಿದ್ದನೆಂದು ತಜ್ಞರ ಅಭಿಪ್ರಾಯ.
ಆದಿವಾಸಿಗಳಲ್ಲಿ ನೃತ್ಯ

	ಪ್ರಪಂಚದಾದ್ಯಂತ ಎಲ್ಲ ಆದಿವಾಸಿಗಳಲ್ಲೂ ಕುಣಿತ ಕಂಡುಬಂದಿದೆ. ಅದು ಅವರಿಗೆ ಭಾವಾವೇಶಗಳ ಅಭಿವ್ಯಕ್ತಿಗೆ ಉಚಿತವಾಗಿರುವ ಮಾಧ್ಯಮ. ಆದ್ದರಿಂದ ಅವರಿಗೆ ಒಂದು ಕಡೆ ವ್ಯಾಯಾಮ ಮತ್ತೊಂದು ಕಡೆ ಮನೋರಂಜನೆ ಎರಡೂ ಲಭ್ಯ. ತಂತಮ್ಮ ಮತಧರ್ಮಗಳ ಆಚರಣೆಗಳ ಅಂಗವಾಗಿ, ಆರ್ಥಿಕ ಪ್ರಗತಿಯನ್ನು ಬಯಸಿ ಅವರು ಕುಣಿವುದಿದೆ. ಅಂತೂ ಗುಂಪಿನ ನಡುವಣ ಬಾಂಧವ್ಯವನ್ನು ಬಿಗಿಪಡಿಸಲು ಕುಣಿತ ಅವರಿಗೊಂದು ಸಾಧನವಾಗಿದೆ. ಯುದ್ಧ ಹಾಗೂ ದಾಳಿ, ಬೇಟೆ ಹಾಗೂ ಮೀನುಗಾರಿಕೆ, ಬಿತ್ತನೆ ಮತ್ತು ಸುಗ್ಗಿ-ಹೀಗೆ ಈ ಎಲ್ಲ ಸಂದರ್ಭಗಳಲ್ಲೂ ಅವರು ಕುಣಿಯುತ್ತಾರೆ. ಮಳೆ ಬರಲೆಂದು ಬೇಡಲು ಅವರು ಕುಣಿವುದುಂಟು. ಒಂದು ಸಾರ್ವಜನಿಕ ಕಟ್ಟಡವನ್ನೊ, ಹೊಸತೊಂದು ದೋಣಿಯನ್ನೋ ಕಟ್ಟುವಾಗ, ಹುಟ್ಟು, ಮದುವೆ, ಸಾವು ಈ ಮೊದಲಾದ ಸಂದರ್ಭಗಳಲ್ಲೂ ಕುಣಿತ ಇರುತ್ತದೆ. ಧಾರ್ಮಿಕ ನೃತ್ಯಗಳಲ್ಲಿ ಮಾಟಗಾರ ವೈದ್ಯನಿಗೆ ಪ್ರಧಾನ ಸ್ಥಾನ ಉಂಟು. ಗಂಭೀರ ಕುಣಿತದ ನಡುವೆ ಕೋಡಂಗಿ ಕುಣಿತ ಇರುವುದು ಸಾಮಾನ್ಯ. ಕುಣಿಯದ ಆದಿವಾಸಿ ಬುಡಕಟ್ಟುಗಳು ತೀರಾ ಅಪರೂಪ. ಏಷ್ಯಾದ ಮೈದಾನಗಳಲ್ಲಿ ಅಲೆದಾಡುವ ಒಂದು ಬುಡಕಟ್ಟಿನವರು ಮಾತ್ರ ಕುದುರೆಯ ಮೇಲೆ ಸವಾರಿ ಮಾಡುತ್ತಾರಲ್ಲದೇ ಕಾಲವನ್ನು ಯಾವ ಕೆಲಸಕ್ಕೆ ಬಳಸುವುದೂ ಅವಮಾನಕರ ಎಂದು ತಿಳಿದ್ದಾರಾಗಿ ಅವರಲ್ಲಿ ಮಾತ್ರ ಕುಣಿತವಿಲ್ಲ.

	ಆದಿವಾಸಿಗಳ ಕುಣಿತಕ್ಕೆ ಪ್ರಕೃತಿಯೇ ಮೇಲುಪಂಕ್ತಿ. ಗಿಡಮರಗಳ ತೊನೆದಾಟ, ಹಕ್ಕಿಗಳ ಹಾಗೂ ಇತರ ಪ್ರಾಣಿಗಳ ಪ್ರಣಯನೃತ್ಯ-ಇವನ್ನು ಆದಿವಾಸಿಗಳೂ ತಮ್ಮ ನೃತ್ಯಗಳಲ್ಲಿ ಅನುಕರಿಸುತ್ತಾರೆ. ಇವರ ನೃತ್ಯಕ್ಕೆ ಹಿನ್ನೆಲೆ ಸಂಗೀತ ಒದಗಿಸುವ ಜನ ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಮರದ ತುಂಡುಗಳು, ಲೋಹದ ತಟ್ಟೆಗಳು, ಕುದುರೆ ಜವೆ ಕಟ್ಟಿದ ಸರಳ ವಾದ್ಯಗಳು, ಬಿದಿರ ಕೊಳವೆಯಿಂದ ಮಾಡಿದ ಪಿಳ್ಳಂಗೋವಿ ಮೊದಲಾದುವನ್ನು ಬಳಸುತ್ತಾರೆ. ಮರದ ಲೋಹದ ಹಲಗೆಗಳು ತಾಳಗಳಾಗುತ್ತವೆ. ಏನೂ ಇಲ್ಲದಾಗ ಕೈಚಪ್ಪಾಳೆ ಹಾಕುತ್ತ ಲಯಬದ್ಧವಾಗಿ ಇವರು ಕುಣಿಯುತ್ತಾರೆ. ಆಫ್ರಿಕದ ಆದಿವಾಸಿಗಳ ನೃತ್ಯ ಹಾಗೂ ಸಂಗೀತಗಳಿಂದ ಉತ್ತರ ಅಮೆರಿಕದಲ್ಲಿ ಇಂದು ಜನಪ್ರಿಯವಾಗಿರುವ ಜಾಸ್ó ಸಂಗೀತ ಹುಟ್ಟಿರುವ ಸಂಗತಿ ಸರ್ವವಿದಿತ. 

	ಕನ್ನಡನಾಡಿನ ಜನಪದರು ಕುಣಿತಕ್ಕೆ ಕೋಲು, ಜಾಗಟೆ, ತಾಳ, ತಮಟೆ, ನಗಾರಿ, ಚಂಡೆ, ಕೊಳಲು, ಏಕನಾದ, ಚಿಟಿಕೆ, ಕುಣಿಮಿಣಿ ಮುಂತಾದ ವಾದ್ಯಗಳನ್ನು ಬಳಸುವುದು ಎಲ್ಲರಿಗೂ ತಿಳಿದ ವಿಷಯವೆ. ಅಂಡಮಾನ್ ದ್ವೀಪವಾಸಿಗಳು ಅಗಲವಾದ ಹಲಗೆಯ ಮೇಲೆ ಪಾದವನ್ನು ಜೋರಾಗಿ ಬಡಿಯುತ್ತಾರೆ. ಟೋಂಗ ಆದಿವಾಸಿಗಳು ಟೊಳ್ಳುಗಳುವನ್ನು ಬಡಿಯುತ್ತಾರೆ. ಆಸ್ಟ್ರೇಲಿಯದವರು ತೊಡೆಗಳ ಮೇಲೆ ಹರಡಿದ ಚರ್ಮವನ್ನು ಕುಟ್ಟುತ್ತಾರೆ. ಹೀಗೆ ಬುಡಕಟ್ಟುಗಳು ಬಳಸುವ ವಾದ್ಯಗಳು ಆಯಾ ಪ್ರದೇಶಕ್ಕೆ ಸೇರಿದವು, ಸುಲಭವಾಗಿ ಪ್ರಕೃತಿಯಲ್ಲಿ ದೊರಕುವಂಥವು.

	ನೃತ್ಯದಲ್ಲಿ ಸಾಮಾನ್ಯವಾಗಿ ವಯಸ್ಸಿಗೆ ಬಂದ ಗಂಡಸರು ಹೆಂಗಸರು ಭಾಗವಹಿಸುತ್ತಾರೆ. ಗಂಡು ಹೆಣ್ಣು ಒಟ್ಟಾಗಿ ಕುಣಿಯುವುದು ಅಪರೂಪ. ಒಂದು ಸಾಲಿನಲ್ಲಿ ಗಂಡಸರು ಇನ್ನೊಂದರಲ್ಲಿ ಹೆಂಗಸರು ಎದುರುಬದುರಾಗಿ ನಿಂತು ಕುಣಿಯುವುದು ವಾಡಿಕೆ. ಅನೇಕ ಕುಣಿತಗಳು ಗಂಡಸರಿಗೆ ಮೀಸಲಾದವು. ಗಂಡು ಕುಣಿದರೆ ಹೆಣ್ಣು ಹಿನ್ನೆಲೆ ಸಂಗೀತ ಒದಗಿಸುತ್ತಾಳೆ. ಯುದ್ಧ ನೃತ್ಯಗಳಲ್ಲಿ ಮಾತ್ರ ಹೆಣ್ಣು ಯೋಧರೆದುರು ಕುಣಿವುದಿದೆ. ಸಾಮಾನ್ಯವಾಗಿ ಹೆಣ್ಣು ಗಂಡಿನೆದುರು ಕುಣಿಯದು. ಒಂದು ವೇಳೆ ಕುಣಿದರೆ ಅದು ನೃತ್ಯದ ಕೊನೆಯಲ್ಲಿ ಎಲ್ಲರೊಟ್ಟಿಗೆ, ಅಷ್ಟೆ. ಭಾರತದ ಗಿರಿಜನರ ದೋಹದ ಕುಣಿತಗಳಲ್ಲಿ ಹೆಣ್ಣು ಪ್ರಮುಖ ಪಾತ್ರವಹಿಸುತ್ತದೆ. ಅದೇ ಮೆಲನೇಷ ಮತ್ತು ಆಸ್ಟ್ರೇಲಿಯಗಳಲ್ಲಿ ಇದು ನಿಷಿದ್ಧ. ಹೆಂಗಸರ ಕೆಲವು ನೃತ್ಯಗಳನ್ನು ಗಂಡಸರು ನೋಡಕೂಡದೆಂದಿದೆ. ಉದಾಹರಣೆಗೆ ಬಂಗಾಳದ ಪೂಜಾನೃತ್ಯಗಳು, ಹೆಣ್ಣುಮಕ್ಕಳಿಗೆ ಪ್ರಥಮ ದೀಕ್ಷೆ ಕೊಡುವಾಗಿನ ನೃತ್ಯಗಳು, ಪಶ್ಚಿಮ ಆಫ್ರಿಕದ ಮೆಂಡೆ ಹೆಂಗಸರ ಗುಪ್ತ ಸಮಾಜದ ನೃತ್ಯಗಳು. ಹುಡುಗರು ಹಿರಿಯರನ್ನು ಅನುಕರಿಸಿ ಪ್ರತ್ಯೇಕ ಕುಣಿಯುತ್ತಾರೆ. ಯೋಧರು ಕೊಳ್ಳೆ ಹೊಡೆದು ಹಿಂತಿರುಗಿದಾಗ, ವೈದ್ಯರು ಮಾಟ ಮಾಡುವಾಗ ಗಂಡುಗಳು ಹೆಣ್ಣುಗಳು ಕುಣಿವುದುಂಟು. ಗಂಡು ಹೆಣ್ಣನ್ನು, ಹೆಣ್ಣು ಗಂಡನ್ನು ಒಲಿಸುವುದು ಇಂಥ ನೃತ್ಯಗಳ ಉದ್ದೇಶ.

	ನೃತ್ಯದಲ್ಲಿ ಭಾವಾಭಿವ್ಯಕ್ತಿಗಾಗಿ ದೇಹದ ಎಲ್ಲ ಅವಯವಗಳನ್ನೂ ಬಳಸುವುದಿದೆ. ತೋಳುಗಳು, ತೊಡೆಗಳು, ಕೈಗಳು, ಪಾದಗಳು, ಕೈಕಾಲುಗಳ ಬೆರಳುಗಳು-ಹೀಗೆ ಕತ್ತು, ಸೊಂಟ ಹಾಗೂ ಪಿರ್ರೆಗಳನ್ನು ಅಲುಗಾಡಿಸುವುದು, ಸ್ನಾಯುಗಳನ್ನು ಕುಣಿಸುವುದು, ಹಲ್ಲುಕಿರಿದು ನಾಲಗೆಯನ್ನು ಹೊರಚಾಚಿ ಕೂಗುವುದು, ಕಣ್ಣುಗುಡ್ಡೆಗಳನ್ನು ಆಡಿಸುವುದು-ಇವೆಲ್ಲ ಸರ್ವಸಾಮಾನ್ಯ. ಅನೇಕ ನೃತ್ಯಗಳು ದೇಹಬಲವನ್ನು ಪರೀಕ್ಷೆ ಮಾಡುವಂತಿರುತ್ತವೆ. ಜೂಲು ಮತ್ತು ಮಾವೋರಿ ಯುದ್ಧನೃತ್ಯಗಳಲ್ಲಿ ಕುಣಿವವರು ನೆಲದಿಂದ ಚಂಗನೆ ಮೇಲಕ್ಕೆ ನೆಗೆಯುತ್ತ ಕೈಗಳಿಂದ ಎದೆ ಬಡಿದುಕೊಳ್ಳೂತ್ತಾರೆ; ಇಲ್ಲವೆ ಕೈಯ ಭರ್ಜಿಗಳಿಂದ ಗುರಾಣಿಗಳನ್ನು ತಟ್ಟುತ್ತಾರೆ. ಭಾರತದ ನಾಗಾಜನಗಳ ತಲೆಬೇಟೆಯ ನೃತ್ಯದಲ್ಲಿ ಚಂಗನೆ ಮೇಲಕ್ಕೆ ನೆಗೆದ ನೃತ್ಯಗಾರ ಮತ್ತೆ ನೆಲ ಮುಟ್ಟುವುದರೊಳಗೆ ಮೂರು ಬಾರಿ ತನ್ನ ಕಾಲುಗಳನ್ನು ಅಡ್ಡ ಆಡಿಸುತ್ತಾನೆ.

	ಅನೇಕ ನೃತ್ಯಗಳು ನಾಟಕೀಯವಾಗಿರುತ್ತವೆ. ಇಲ್ಲವೆ ಜೀವನದ ಅನುಕರಣ ರೂಪದವಾಗಿರುತ್ತವೆ. ಯುದ್ಧ ದಾಳಿಗಳನ್ನು ನಿರೂಪಿಸುವಂತೆ ಅವು ಶಾಂತ ಜೀವನದ ಬೇಟೆ, ಮೀನು ಹಿಡಿಯುವುದು, ಉಳುಮೆ ಮೊದಲಾದ ಘಟನೆಗಳನ್ನೂ ಚಿತ್ರಿಸುತ್ತವೆ. ಆಫ್ರಿಕದ ಬುಷ್ ಜನ ಕಪ್ಪೆಗಳನ್ನು ಜೇನು ನೊಣಗಳನ್ನು ಬಬೂನುಗಳನ್ನು ಅನುಕರಿಸುತ್ತಾರೆ. ಒಂದು ಪ್ರಾಣಿಯ ಇಲ್ಲವೆ ಒಂದು ಸಸ್ಯದ ಫಲವತ್ತತೆಯನ್ನು ಹೆಚ್ಚಿಸಲು ಕುಲದೇವತಾರಾಧನೆಯ ಅಂಗವಾಗಿ ನೃತ್ಯಗಳು ಏರ್ಪಡುವುದುಂಟು. ಅಮೆರಿಕದ ಮಂದನ್ ಇಂಡಿಯನರು ತಮ್ಮ ಎಮ್ಮೆ ನೃತ್ಯದಲ್ಲಿ ಎಮ್ಮೆಯ ಚರ್ಮವನ್ನು ಹೊದ್ದು ಆ ಪ್ರಾಣಿಯ ಹಾವಭಾವಗಳನ್ನು ಅನುಕರಣೆ ಮಾಡುತ್ತಾರೆ. ಆಸ್ಟ್ರೇಲಿಯದ ಆದಿವಾಸಿಗಳು ಕಾಂಗರೂ ಮತ್ತು ಈಮ್ಯೂಗಳನ್ನು ಅನುಕರಿಸುವುದಿದೆ. ಬೋರ್ನಿಯಾದಲ್ಲಿ ಬತ್ತದ ನಾಟಿ, ಬೆಳೆ, ಸುಗ್ಗಿಗಳನ್ನು ಆಫ್ರಿಕದಲ್ಲಿ ಮೆಕ್ಕೆಜೋಳ ನಾಟಿ, ಬೆಳೆ, ಸುಗ್ಗಿಗಳನ್ನು ಅನುಕರಿಸುವ ನೃತ್ಯಗಳಿವೆ. ಇಂಥ ಅನುಕರಣೆ ನೃತ್ಯಗಳಿಂದ ಆಯಾ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ ಎಂದು ಆ ಜನರ ನಂಬಿಕೆ. ಬರಗಾಲ ಬಂದಾಗ ಮಳೆಯನ್ನು ಆಹ್ವಾನಿಸುವ ನೃತ್ಯದಲ್ಲಿ ಮಳೆರಾಯನ ಅನುಕರಣೆ ಇದೆ. ಮದುವೆ ಸಾವುಗಳಲ್ಲಿ ಆಯಾ ಸಂದರ್ಭವನ್ನು ಸಂಕೇತಿಸುವ ನೃತ್ಯಗಳಿವೆ. ಮದುವೆ ಕಾಲದಲ್ಲಿನ ನೃತ್ಯ ಸಂತಾನಾಭಿವೃದ್ಧಿಗಾಗಿ ನಡೆಯುವಂಥವು. ಸಾವಿನ ಕಾಲದಲ್ಲಿನ ನೃತ್ಯ ಸತ್ತವನ ಆತ್ಮಕ್ಕೆ ಮುಕ್ತಿ ಕೋರಲು, ಆ ಆತ್ಮ ಪಿಶಾಚಿಯಾಗುವುದನ್ನು ತಡೆಗಟ್ಟಲು ನಡೆಯುವಂಥದು.

	ಈ ಎಲ್ಲ ನೃತ್ಯಗಳಲ್ಲಿನ ಕುಣಿತ, ಸಂಗೀತ, ಹಾವಭಾವ-ಎಲ್ಲ ಹತ್ತಾರು ವರ್ಷಗಳ ಕಠಿಣ ಪ್ರಯತ್ನದಿಂದ ಸಿದ್ಧಿಸತಕ್ಕಂಥವು. ನೃತ್ಯದಲ್ಲಿ ಚಾಚೂ ತಪ್ಪಿದರೂ ಇಡೀ ಬುಡಕಟ್ಟಿಗೂ ತಮಗೂ ದೋಷ ತಗಲುವುದೆಂಬ ನಂಬಿಕೆ ಇರುವುದರಿಂದ ನೃತ್ಯಕಾರರು ತುಂಬ ಎಚ್ಚರಿಕೆಯಿಂದ ಕುಣಿಯುತ್ತಾರೆ.

	ಆರ್ಥಿಕ ಅಗತ್ಯಗಳು, ಧಾರ್ಮಿಕ ಆಚರಣೆಗಳು, ಕಾಯಿಲೆಗಳಿಗೆ ಮನಃಶಾಸ್ತ್ರ ರೀತ್ಯ ಒದಗುವ ಪರಿಹಾರ, ಲೈಂಗಿಕ ಆಸಕ್ತಿಗಳ ಪ್ರಚೋದನೆ, ಯುದ್ಧಕ್ಕೆ ಬೇಕಾದ ಹುಮ್ಮಸ್ಸು-ಇವೆಲ್ಲ ಆದಿವಾಸಿ ಜನರ ಕುಣಿತಕ್ಕೆ ಕುಮ್ಮಕ್ಕು ಕೊಡುತ್ತವೆಂದು ಹೇಳಲಾಗಿದೆ. ಆದರೆ ಆದಿವಾಸಿ ಕುಣಿತಗಳನ್ನು ಅಭ್ಯಸಿಸಿದ ತಜ್ಞರ ಪ್ರಕಾರ ಅವುಗಳಲ್ಲಿ ವೈವಿಧ್ಯ ಕಡಿಮೆ, ಏಕತಾನತೆ ಹೆಚ್ಚು. ಅಲ್ಲದೆ ಅವು ಅನಾವಶ್ಯಕವಾಗಿ ಉದ್ದನಾಗಿ ಇರುತ್ತವೆ. ಕುಣಿತ ಅನೇಕ ವೇಳೆ ದಿನಗಟ್ಟಲೆ ನಡುವೆ ವಿಶ್ರಾಂತಿ ಇಲ್ಲದ ರೀತಿಯಲ್ಲಿ ನಡೆವುದುಂಟು. ಕುಣಿವ ಪಂಗಡದ ಹಲವರು ಸುಸ್ತಾಗಿ ಕುಸಿದು ಬಿದ್ದಾಗ ಇತರರು ಅವರ ಜಾಗದಲ್ಲಿ ನಿಂತು ಕುಣಿಯುತ್ತಾರೆ. ಆಫ್ರಿಕದಲ್ಲಿದು ಸಾಮಾನ್ಯ. ನ್ಯೂ ಗಿನಿಯ ಜನ ಬಿಸಿ ಹತ್ತಿ ದಣಿವಿನಿಂದ ಕುಸಿಯುವವರೆಗೂ ಕುಣಿಯುತ್ತಾರೆ. ನಾಗಾಜನರ ನೃತ್ಯಗಳು ಅನ್ನಪಾನ ವಿಶ್ರಾಂತಿಗಳಿಲ್ಲದೆ ದಿನಗಟ್ಟಲೆ ನಡೆಯುತ್ತವಂತೆ. ಉತ್ತರ ಅಮೇರಿಕದ ಇಂಡಿಯನ್ನರ ಬುರುಡೆ ನೃತ್ಯ ಹದಿನೈದು ದಿನ ನಿರಂತವಾಗಿ ನಡೆಯುತ್ತದೆಂದು ಮಂದನರ ಎಮ್ಮೆನೃತ್ಯ ಮೂರು ವಾರಗಳು ನಡೆಯುತ್ತವೆಂದು ಕಂಡವರು ಹೇಳಿದ್ದಾರೆ.

ಪಾಶ್ಚಾತ್ಯ ನೃತ್ಯ

	ಗ್ರೀಕರ ಐತಿಹ್ಯದ ಪ್ರಕಾರ ರ್ಹೀಆ ದೇವತೆ ಫ್ರಿಜಿಯ ಮತ್ತು ಕ್ರೀಟಿನ ಜನಕ್ಕೆ ಕುಣಿದು ಕೈಚಪ್ಪಾಳೆ ತಟ್ಟುವುದನ್ನು ಕಲಿಸಿದಳು ಎನ್ನಲಾಗಿದೆ. ಮಗು ಜ್ಯೂಸನ ಅಳಲು ಹೊಟ್ಟೆಬಾಕ ತಂದೆ ಕ್ರೋನಸ್‍ಗೆ ಕೇಳಿಸದಿರಲೆಂದು ಈ ಗದ್ದಲದ ನೃತ್ಯವನ್ನು ಕೈಗೊಳ್ಳಲಾಯಿತಂತೆ. ಪ್ಲೇಟೋನ ಪ್ರಕಾರ ಮಾನವರು ಕುಣಿಯಲು ಕಲಿತದ್ದು ದೇವತೆಗಳಿಂದ. ಇತಿಹಾಸ ಹೇಳುವಂತೆ ಮಿನೋವನರಿಂದ ಗ್ರೀಕರು ನೃತ್ಯ ಪ್ರಕಾರವನ್ನು ಕಲಿತು ಬೆಳೆಸಿದರು. ಕ್ನಾಸಸ್ಸಿನಲ್ಲಿದ್ದ ನೃತ್ಯರಂಗವನ್ನು ಹೋಮರ್ ಹೆಸರಿಸಿದ್ದಾನೆ. ಬಲು ಹಿಂದಿನಿಂದಲೂ ಗ್ರೀಕರಿಗೆ ನೃತ್ಯ ಧಾರ್ಮಿಕ ವಿಧಿಗಳ ಒಂದು ಅವಿಭಾಜ್ಯ ಅಂಗವಾಗಿತ್ತು. ಡೈಯನೈಸಸ್ಸನ ಹಬ್ಬದಲ್ಲಿ ನಡೆಯುತ್ತಿದ್ದ ನೃತ್ಯಮೇಳಗಳೇ ಮುಂದಿನ ಗ್ರೀಕ್ ನಾಟಕಗಳಲ್ಲಿ ವಿಕಾಸಗೊಂಡಿರುವುದನ್ನು ನಾವು ಕಾಣುತ್ತೇವೆ. ಜೀವನಾನುಕರಣೆ ಹೆಚ್ಚಿದಂತೆ, ನೃತ್ಯಕ್ಕೆ ಇದ್ದ ಧಾರ್ಮಿಕ ಮೂಲ ಮಾಯವಾಗುತ್ತ ಜಾತ್ಯತೀತ ವೃತ್ತಿಪರ ನೃತ್ಯಗಳು ಹೆಚ್ಚಿದಂತೆ ಗ್ರೀಕರ ಪ್ರಾಚೀನ ನೃತ್ಯ ಕಾಣೆಯಾಗುತ್ತ ಬಂತು. 

	ನೃತ್ಯದಿಂದ ಎರಡು ಪ್ರಯೋಜನಗಳಿವೆ ಎಂದು ಗ್ರೀಕರು ತಿಳಿದಿದ್ದರು. ಒಂದನೆಯದಾಗಿ ಲಯಬದ್ಧವಾದ ನೃತ್ಯದಿಂದ ಕುಣಿವವನ ಮನಸ್ಸು ಮತ್ತು ದೇಹಗಳ ಸಾಮರಸ್ಯ ಏರ್ಪಡುತ್ತದೆ. ಎರಡನೆಯದಾಗಿ ನೋಟಕರಲ್ಲಿ ನೃತ್ಯದ ಭಾವಾಭಿನಯಗಳಿಂದಾಗಿ ಹೃದಯ ಪರಿವರ್ತನೆ ಆಗುತ್ತದೆ.

	ಇಂಥ ನೃತ್ಯಗಳನ್ನು ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಖ್ಯಾತ ನೃತ್ಯಕಾರರಾದ ಐಸಡೋರ ಡಂಕನ್ ಮತ್ತು ಜಾಕ್ವೆಸ್ ಡಾಲ್‍ಕ್ರೋಸ್ ಎಂಬಿಬ್ಬರು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು ಎಂಬ ವಿಷಯವನ್ನು ಇಲ್ಲಿ ಉಲ್ಲೇಖಿಸಬಹುದು.

	ಗ್ರೀಕ್ ಧಾರ್ಮಿಕ ನೃತ್ಯಗಳು ಎರಡು ಬಗೆಯವು. ಒಂದು-ಅಪಾಲೊ ದೇವತೆಯ ಗೌರವಾರ್ಥ ನಡೆಯುತ್ತಿದ್ದ ಸಾಂಪ್ರದಾಯಿಕ ನೃತ್ಯ. ಎರಡು-ಡೈಯನೈಸಸ್ ದೇವತೆಯ ಆರಾಧನಾಕಾಲದಲ್ಲಿ ನಡೆಯುತ್ತಿದ್ದ ರೂಕ್ಷ ನೃತ್ಯ.

	ಗ್ರೀಕರಲ್ಲಿ ನೃತ್ಯ ಕೆಲವರ ಸ್ವತ್ತಾಗಿರಲಿಲ್ಲ. ಇಡೀ ಜನತೆ ನೃತ್ಯದಲ್ಲಿ ಭಾಗಿಯಾಗುತ್ತಿತ್ತು. ಹುಟ್ಟು, ಮದುವೆ, ಸಾವು ಮೊದಲಾದ ಎಲ್ಲ ಸಂದರ್ಭಗಳಲ್ಲೂ ಕುಣಿತ ಇರುತ್ತಿತ್ತು. ಅನೇಕ ಬಗೆಯ ಜನಪ್ರಿಯ ಹಾಗೂ ಸಾಂಪ್ರದಾಯಿಕ ನೃತ್ಯಗಳು ಅಂದು ಪ್ರಚಲಿತವಾಗಿದ್ದುವು ಎಂದು ಚರಿತ್ರೆ ಹೇಳುತ್ತದೆ.

	ರೋಮಿನಲ್ಲಿ ಪ್ರಾರಂಭದ ದಿನಗಳಲ್ಲಿ ಸಾಂಪ್ರದಾಯಿಕ ರೀತಿಯ ಧಾರ್ಮಿಕ ನೃತ್ಯಗಳಿದ್ದವು. ಕ್ಷೇತ್ರಶುದ್ಧಿ ಮೊದಲಾದ ಕೆಲಸಗಳು ನಡೆವಾಗ ಪುರೋಹಿತ ವರ್ಗದವರು ನೃತ್ಯ ಮಾಡುತ್ತಿದ್ದರು. ಯೋಧರ ಯುದ್ಧ ನೃತ್ಯಗಳು, ಮಾರ್ಸ್ ದೇವತೆಯ ಆರಾಧಕರಾದ ಪುರೋಹಿತರ ನೃತ್ಯಗಳು, ಸಾವಿನ ಕಾಲದ ನೃತ್ಯಗಳು ಇದ್ದುವು. ಈ ಸಾವಿನ ನೃತ್ಯಗಳೇ ಮುಂದೆ ಬಂದ ಅಣಕ ನಾಟಕಕ್ಕೆ (ಮೈಮ್) ನಾಂದಿಯಾದುವು. ಒಟ್ಟಿನಲ್ಲಿ ರೋಮಿನ ಕುಣಿತಗಳಲ್ಲಿ ಗ್ರೀಕ್ ಹಾಗೂ ಎಟ್ರುಸ್ಕನ್ ಪ್ರಭಾವಗಳನ್ನು ಹೇರಳವಾಗಿ ಕಾಣಬಹುದು. ರೋಮಿಗೆ ಬಂದ ಪ್ಲೇಗಿನ ಪಿಡುಗನ್ನು ನಿವಾರಿಸಲು ಕ್ರಿ.ಪೂ. 364ರಲ್ಲಿ ಎಟ್ರುಸ್ಕನ್ ನಟರನ್ನು ಆಹ್ವಾನಿಸಲಾಯಿತೆಂದು ಒಂದು ಕಥೆ ಇದೆ. ಹೊರಗಿನಿಂದ ಬಂದ ಅಣಕ ನಾಟಕದಿಂದ ರೋಮನರ ಪ್ಯಾಂಟೋಮೈಮ್ (ಒಂದು ಬಗೆಯ ಹಾಸ್ಯ ನಾಟಕ) ಉದಿಸಿತು. ಇದನ್ನು ನೋಡಿಯೆ ಪ್ರಸಿದ್ಧ ಸಿನಿಕ ತತ್ತ್ವಜ್ಞಾನಿ ಡಿಮೆಟ್ರಿಯಸ್ ಹೇಳಿದ `ಇದು ಕೇವಲ ನೋಡುವಂಥದು ಮಾತ್ರವಲ್ಲ. ಇದರಲ್ಲಿ ನೋಡುವುದು ಕೇಳುವುದು ಎರಡೂ ಬೆರೆತಿವೆ. ಇಲ್ಲಿ ನಿಮ್ಮ ಕೈಗಳೆ ಕಿವಿಗಳಾಗಿವೆ ಎಂದು.

	ರಾಜ ಮಹಾರಾಜರ ಕಾಲದಲ್ಲಿ ಖಾಸಗಿಯಾಗಿದ್ದ ನೃತ್ಯ ಸಾರ್ವಜನಿಕ ನೃತ್ಯವಾಗಿ ಮಾರ್ಪಟ್ಟಿತು. ಆದರೆ ಸಾರ್ವಜನಿಕ ನೃತ್ಯಗಳಲ್ಲಿ ಕುಣಿಯುತ್ತಿದ್ದವರು ಹೊರಗಿನಿಂದ ಬಂದು ಅಲ್ಲಿ ನೆಲಸಿದ ಪರದೇಶಿಯರು.

	ಮಧ್ಯಯುಗದಲ್ಲಿ ನೃತ್ಯ: ಹೊಸಹುಟ್ಟಿನ ಕಾಲದಲ್ಲಿ ಯೂರೋಪಿನಲ್ಲೆಲ್ಲ ರಾಜಾಸ್ಥಾನಗಳಲ್ಲಿ ಸಾಮಾನ್ಯವಾಗಿದ್ದುದು ಬೇಸ್ ಡ್ಯಾನ್ಸ್ ಎಂಬುದು.

	ಅನಂತರ, ಷೇಕ್ಸ್‍ಪಿಯರ್ ಉಲ್ಲೇಖಿಸಿರುವ ಗಲಿಯರ್ಡ್ ನೃತ್ಯವನ್ನು ಹೋಲುವ ಟಾರ್ಡಿಷನ್ ನೃತ್ಯ ಬಳಕೆಗೆ ಬಂತು. ಪಾವನ್ ಎಂಬ ನೃತ್ಯಪ್ರಭೇದವೂ ಈ ಕಾಲದ್ದೆ. ಬ್ರ್ಯಾನಲ್ ನೃತ್ಯ (ಅದು ಇಂಗ್ಲೆಂಡಿನಲ್ಲಿ ಬ್ರಾಲ್ ಎಂದು ಪ್ರಸಿದ್ಧ) ನಿಜವಾಗಿ ಜನಪದ ನೃತ್ಯಗಳಿಂದ ಬೆಳೆದು ಬಂದದ್ದು.

	ರಾಣಿ ಎಲಿಜಬೆತ್ತಳ ಕಾಲಕ್ಕೆ ಕುಷನ್ ಡಾನ್ಸ್ ಮತ್ತು ಸೆಲಿಂಜರ್ಸ್ ರೌಂಡ್‍ಗಳಂಥ ಗ್ರಾಮೀಣ ನೃತ್ಯಗಳು ಜನಪ್ರಿಯವಾಗಿದ್ದವು. ಮಹಾರಾಣಿಯೇ ಕೊರ್ಯಾಂಟೊ ಮತ್ತು ವೋಲ್ಟ ನೃತ್ಯಗಳನ್ನು ಕಲಿತಿದ್ದಳು. ಪ್ರೊವೆನ್ಸಿನ ವೋಲ್ಟದಿಂದಲೆ ಆಧುನಿಕ ವಾಲ್ಟ್ಸ್ ನೃತ್ಯ ಉಗಮಿಸಿರುವುದು. ಮಿನ್ಯುಯೆಟ್ ನೃತ್ಯ ಮೇಲಾಗುವವರೆಗೂ ಕೊರ್ಯಾಂಟೊ ನೃತ್ಯ 17ನೆಯ ಶತಮಾನದ ಮುಖ್ಯ ಆಸ್ಥಾನ ನೃತ್ಯವಾಗಿತ್ತು.

	ನೂರು ವರ್ಷಗಳ ಕಾಲ ಮಿನ್ಯುಯೆಟ್ ನೃತ್ಯ ಬಾಲ್‍ರೂಮ್ ನೃತ್ಯಗಳ ರಾಣಿಯಾಗಿ ಮೆರೆಯಿತು. ಇದು ಮತ್ತು ಗ್ಯಾವೊಟ್ ನೃತ್ಯ ಫ್ರೆಂಚ್ ಗೇಯಕಾರ ಲಲಿಯ ಮೂಲಕ ಫ್ರಾನ್ಸಿನ 14ನೆಯ ಲೂಯಿಯ ಆಸ್ಥಾನವನ್ನು ಸೇರಿದವು. ಆದರೆ ಫ್ರಾನ್ಸಿನ ಮಹಾಕ್ರಾಂತಿ ಇಂಥ ಅನೇಕ ಆಸ್ಥಾನ ನೃತ್ಯಗಳಿಗೆ ಚರಮಶ್ಲೋಕ ಹಾಡಿತು. ಮುಂದೆ 19ನೆಯ ಶತಮಾನದ ಅಂತ್ಯದವರೆಗೆ ಇಂಗ್ಲೆಂಡಿನ ಗ್ರಾಮೀಣ ನೃತ್ಯಗಳು ಫ್ರಾನ್ಸಿನಲ್ಲಿ ಸ್ಥಳ ದೊರಕಿಸಿಕೊಂಡವು. ಮಿನ್ಯುಯೆಟ್ ಮಾತ್ರ ಇಂಗ್ಲೆಂಡಿನಲ್ಲಿ ಇತರ ಗ್ರಾಮೀಣ ನೃತ್ಯಗಳೊಡನೆ ಜೀವ ಉಳಿಸಿಕೊಂಡು ಬಂತು.

	ರಮ್ಯಯುಗ ಸಾಹಿತ್ಯದಲ್ಲಿ ಕಾಣಿಸಿಕೊಂಡ ಕಾಲದಲ್ಲಿ ಅಂಥದೇ ಒಂದು ಧೋರಣೆ ನೃತ್ಯರಂಗವನ್ನು ಪ್ರವೇಶಿಸಿತು. ಆಗ ಇಂಗ್ಲೆಂಡನ್ನು ಪ್ರವೇಶಿಸಿದ ವಾಲ್ಟ್ಸ್ ನೃತ್ಯ ಪ್ರಾರಂಭದಲ್ಲಿ ಸ್ವಲ್ಪ ಪ್ರತಿಭಟನೆಗಳನ್ನು ಎದುರಿಸಿತಾದರೂ ಶತಮಾನಗಳ ಕಾಲ ತನ್ನ ರಾಜತ್ವವನ್ನು ಸ್ಥಾಪಿಸಿಬಿಟ್ಟಿತು. ಸ್ಟ್ರಾಸ್ ಮತ್ತು ಲ್ಯಾನರ್ ಎಂಬ ಗೇಯಕಾರರು ವಾಲ್ಟ್ಸ್‍ಗೆ ಇನ್ನಿಲ್ಲದ ಖ್ಯಾತಿಯನ್ನು ತಂದುಕೊಟ್ಟರು. ಅಲ್ಲದೆ ಫ್ರಾನ್ಸಿನ ಕ್ವಾಡ್ರಿಲ್ ಎಂಬ ನೃತ್ಯ ಇಂಗ್ಲೆಂಡಿನ ರಾಜಾಸ್ಥಾನವನ್ನು ಪ್ರವೇಶಿಸಿದ್ದು ಮೊದಲ ಮಹಾಯುದ್ಧ ಮುಗಿಯುವವರೆಗೂ ಅಲ್ಲಿಂದ ಕಾಲು ಕೀಳಲಿಲ್ಲ. 1884ರಲ್ಲಿ ಕಾಣಿಸಿಕೊಂಡ ಪೊಲ್ಕನೃತ್ಯ ಜನರ ಹುಚ್ಚು ಹೊಗಳಿಕೆಗೆ ಪಕ್ಕಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬೊಹೀಮಿಯದಲ್ಲಿ ಹುಟ್ಟಿತೆನ್ನಲಾದ ಈ ನೃತ್ಯದ ಹಿನ್ನೆಲೆಯ ನವುರಾದ ಹಾಡು, ಕುಣಿತದ ವೈಖರಿ ಇಡಿ ಯೂರೋಪನ್ನೆ ಮುಗ್ಧಗೊಳಿಸಿತು. ಹೀಗೆ ಪೋಲ್ಕನೃತ್ಯ ವಾಲ್ಟ್ಸ್ ನೃತ್ಯಕ್ಕೆ ಗಂಭೀರ ಸ್ಪರ್ಧಿಯಾಯಿತು. ಕ್ವಾಡಿಲ್‍ನಂತೆ ಪೋಲ್ಕ 1914ರ ತನಕ ಆಸ್ಥಾನವನ್ನು ಆಕ್ರಮಿಸಿತ್ತು. 1884ರ ಹೊತ್ತಿಗೆ ನೃತ್ಯಕಲೆಯ ಬಗ್ಗೆ ಜನಕ್ಕೆ ಸಾಕಷ್ಟು ಅಭಿಮಾನ ಮೂಡಿತ್ತಾಗಿ ಅವರ ದೃಷ್ಟಿ ಪೋಲೆಂಡಿನ ಮಸೂರ್ಕ ನೃತ್ಯದತ್ತ ಹರಿಯಿತು. ಹೀಗಾಗಿ ಪೋಲ್ಕ-ಮಸೂರ್ಕ ನೃತ್ಯ ಪಂಥವೊಂದು ಆವತರಿಸಿತು.

	ಇಂಗ್ಲಿಷ್ ಮೂಲದ ದಿ ಲಾನ್ಸರ್ಸ್ ಎಂಬ ನೃತ್ಯವನ್ನು 1850ರಲ್ಲಿ ಮದಾಮ್ ಸಾಕರ್ ಎಂಬಾಕೆ ಲಂಡನ್ನಿಗೆ ತಂದಳು. ಅದು ಒಂದನೆಯ ಮಹಾಯುದ್ಧ ಮುಗಿದು ಹೊಸ ನೃತ್ಯವಿಧಾನಗಳು ಬಳಕೆಗೆ ಬರುವವರೆಗೆ ಜನಪ್ರಿಯವಾಗಿತ್ತು.

	19ನೆಯ ಶತಮಾನ ಮುಗಿವ ಹೊತ್ತಿಗೆ ಅಮೆರಿಕದಿಂದ ಕೆಲವು ಹೊಸ ನೃತ್ಯಗಳು ಯೂರೋಪಿಗೆ ಆಮದಾದವು.

	ಆಧುನಿಕ ಯುಗದಲ್ಲಿ ನೃತ್ಯ: ವಿಕ್ಟೋರಿಯ ಯುಗದ ಕೊನೆಯ ವರ್ಷಗಳಲ್ಲಿ ನೃತ್ಯಗಳಲ್ಲಿ ಜನಗಳ ಆಸಕ್ತಿ ಕ್ಷೀಣವಾಗತೊಡಗಿತು. ಆ ಯುಗ ಮುಗಿದು ಏಳನೆಯ ಎಡ್ವರ್ಡ್ ರಾಜನಾದಾಗ ಕುಗ್ಗಿದ ಆಸಕ್ತಿ ಮತ್ತೆ ಕೆರಳಿತು. ಬಹುಶಃ ವರ್ನನ್ ಕ್ಯಾಸಲ್ ದಂಪತಿಗಳ ಅಮೋಘ ನೃತ್ಯಗಳು ಯೂರೋಪಿನಲ್ಲೂ ಅಮೆರಿಕದಲ್ಲೂ ಅನೇಕಾನೇಕ ಯುವಕರ ಮನಸ್ಸನ್ನು ಆಕರ್ಷಿಸಿರುವುವು. ಐದನೆಯ ಜಾರ್ಜರ ಪಟ್ಟಾಭಿಷೇಕದ ಕಾಲಕ್ಕೆ ಈ ಹೊಸ ಹುರುಪಿನ ಅಲೆ ಇಂಗ್ಲೆಂಡನ್ನು ಪ್ರವೇಶಿಸಿತು. ಅದರೊಂದಿಗೆ ಬಾಸ್ಟನ್ ಎಂಬ ನೃತ್ಯಪ್ರಭೇದವೂ ಇಂಗ್ಲೆಂಡನ್ನು ಪ್ರವೇಶಿಸಿತು. ಇದೇ ಬಾಸ್ಟನ್ ನೃತ್ಯ ಜಾಸ್ ಸಂಗೀತದೊಡನೆ ಮಿಳಿತವಾಗಿ ಮುಂದೆ ಖ್ಯಾತ ನೃತ್ಯ ವಿಧಾನ ರ್ಯಗ್ ಎಂಬುದಕ್ಕೆ ಎಡೆಕೊಟ್ಟಿತು (1912).

	ಒಂದನೆಯ ಮಹಾಯುದ್ಧಕ್ಕೆ ಸ್ವಲ್ಪ ಮೊದಲು ಬಳಕೆಗೆ ಬಂದ ಫಾಕ್ಸ್ ಟ್ರಾಟ್ ಎಂಬ ಉತ್ತರ ಅಮೆರಿಕದ ಇಂಡಿಯನರ ಒಂದು ನೃತ್ಯ ತನ್ನ ಸ್ವೇಚ್ಛೆಯ ನಡೆಯಿಂದಾಗಿ ಸಾಂಪ್ರದಾಯಿಕ ನೃತ್ಯಕ್ಕೆ ಒಂದು ಸವಾಲಾಯಿತು. 1918ರ ಹೊತ್ತಿಗೆ ಇಂಗ್ಲೆಂಡಿನ ನವ ನೃತ್ಯ ಶಿಕ್ಷಕರು ಈ ಫಾಕ್ಸ್ ಟ್ರಾಟ್ ನೃತ್ಯವನ್ನು ಕೈಗೆತ್ತಿಕೊಂಡು ಕೆಲವು ಬದಲಾವಣೆಗಳೊಂದಿಗೆ ಹೊಸತೊಂದು ನೃತ್ಯವಿಧಾನವನ್ನು ರೂಪಿಸಿದರು. ಅದು ಕೆಲವೇ ವರ್ಷಗಳಲ್ಲಿ ಇಡೀ ಯೂರೋಪನ್ನೆ ತನ್ನದನ್ನಾಗಿ ಮಾಡಿಕೊಂಡಿತು. ಅಷ್ಟರಲ್ಲಿ ಟಾಂಗೊ ನೃತ್ಯ ಆರ್ಜೆಂಟೀನದಿಂದ ಪ್ಯಾರಿಸ್ಸಿನ ಮೂಲಕ ಇಂಗ್ಲೆಂಡನ್ನು ತಲಪಿತು. 1844-45ರಲ್ಲಿ ಪೋಲ್ಕ ಎಬ್ಬಿಸಿದಂಥ ಬಿರುಗಾಳಿಯನ್ನು ಈ ಹೊಸ ನೃತ್ಯ ಬಲು ಬೇಗ ಎಬ್ಬಿಸಿತು. ಮಹಾಯುದ್ಧ ಪ್ರಾರಂಭವಾದಾಗ ಫ್ರಾನ್ಸು ಕುಣಿವುದನ್ನು ನಿಲ್ಲಿಸಿತಾಗಿ ಟಾಂಗೊ ಕೆಲಕಾಲ ಅದೃಶ್ಯವಾಗಿ ಬಿಟ್ಟಿತು. 1920ರಲ್ಲಿ ಮತ್ತೆ ಅದು ಸುಲಭೀಕರಣಗೊಂಡು ಕಾಣಿಸಿಕೊಂಡಿತು. ಹನ್ನೆರಡು ವರ್ಷಗಳ ಅನಂತರ ಅದಕ್ಕೆ ಜರ್ಮನಿಯ ಸ್ವಕ್ಯಾಟೊ ನಡಿಗೆಯ ಚುಚ್ಚುಮದ್ದು ಕೊಡಲಾಯಿತು.

	ಒಂದನೆಯ ಮಹಾಯುದ್ಧದ ಕಾಲದಲ್ಲಿ ಲಾನ್ಸರ್ಸ್ ನೃತ್ಯ ಕಣ್ಮರೆಯಾಯಿತು. ಬಾಸ್ಟನ್ ನೃತ್ಯ ಹೇಳಹೆಸರಿಲ್ಲವಾಯಿತು. ಆಗಾಗ ಅಲ್ಲಲ್ಲಿ ನಡೆಯುತ್ತಿದ್ದ ವಾಲ್ಟ್ಸ್ ನೃತ್ಯ ಕೂಡ ಟಾಂಗೋ ನೃತ್ಯದಿಂದ ಪ್ರಭಾವಿತವಾಯಿತು. ಫಾಕ್ಸ್ ಟ್ರಾಟ್ ನೃತ್ಯಕ್ಕೆ ಹಿನ್ನೆಲೆಯಾಗಿ ವಿವಿಧ ಬ್ಯಾಂಡುಗಳ ವಾದನ ಬೆಳೆಯಿತು. ಆಗ ತಾನೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಅಮದಾದ ಷಾರ್ಲೆಸ್ಟನ್ ನೃತ್ಯಕ್ಕೆ ಪ್ರಾಮುಖ್ಯ ಬಂತು. ನೃತ್ಯವನ್ನು ಕಣ್ಣಿಂದ ನೋಡುವ ಜನಕ್ಕಿಂತ ಸಾವಿರಾರು ವೈರ್‍ಲೆಸ್ ಸೆಟ್ಟುಗಳ ಮೂಲಕ ಅದನ್ನು ಕೇಳುವ ಜನ ಹೆಚ್ಚಿದ್ದರಿಂದ ನೃತ್ಯ ಹೊಸತೊಂದು ಮಾರ್ಗವನ್ನು ಹಿಡಿಯಬೇಕಾಯಿತು. ಇದೇ ಕ್ರಷ್ ಮತ್ತು ರಿದ್ಮ್ ನೃತ್ಯಗಳಿಗೆ ನಾಂದಿಯಾಯಿತು.

	1930ರ ಹೊತ್ತಿಗೆ ಕ್ಯೂಬದ ಸಂಗೀತದ ಕಡೆ ಒಲವು ಹೆಚ್ಚಿತಾಗಿ ರಂಬ ಎಂಬ ನೃತ್ಯಪದ್ಧತಿ ಬಳಕೆಗೆ ಬಂತು. ಅದು ಇಂಗ್ಲೆಂಡಿಗಿಂತ ಫ್ರಾನ್ಸಿನಲ್ಲಿ ಹೆಚ್ಚು ಜನಪ್ರಿಯವಾಯಿತು. ಇದೇ ಮಾತನ್ನು ಕಾಂಗ ಮತ್ತು ಸಾಂಬ ನೃತ್ಯಗಳ ಬಗ್ಗೆಯೂ ಹೇಳಬಹುದು. ಬಾಲ್ ರೂಮಿನಲ್ಲಿ ಸೇರುವ ಸ್ತ್ರೀಪುರುಷರಲ್ಲಿ ಹೆಚ್ಚಿನ ಆತ್ಮೀಯತೆಯನ್ನು ವೃದ್ಧಿಸಲು ಪಾರ್ಟಿ ಡಾನ್ಸ್ ಮತ್ತು ಬಿಗ್ ಆ್ಯಪಲ್ ಎಂಬ ಎರಡು ನೃತ್ಯವಿಧಾನಗಳನ್ನು ಅಮೆರಿಕದಲ್ಲಿ ಮತ್ತು ಇಂಗ್ಲೆಂಡಿನಲ್ಲಿ ಬಳಕೆಗೆ ತರಲಾಯಿತು. ಹೆಚ್ಚು ಸುಲಭವಾದ ಹಾಗೂ ಜನಪ್ರಿಯವಾದ ಲ್ಯಾಂಬೆತ್ ವಾಕ್ ನೃತ್ಯ ಕಾಣಿಸಿಕೊಂಡಾಗ ಮೇಲೆ ಹೇಳಿದ ಎರಡು ನೃತ್ಯಗಳ ಪ್ರಾಮುಖ್ಯ ತಗ್ಗಿತು.

	1937ರ ಹೊತ್ತಿಗೆ ಸ್ವಿಂಗ್ ಮ್ಯೂಸಿಕ್ ಬಳಕೆಗೆ ಬಂದಂತೆ ಅದಕ್ಕೆ ಸರಿಹೊಂದುವಂತೆ ನೃತ್ಯ ವಿಧಾನಗಳನ್ನೂ ಮಾರ್ಪಡಿಸಲಾಯಿತು. ಈಚೆಗೆ ಮತ್ತೆ ಜನಮನ ಸಾಂಪ್ರದಾಯಿಕ ಗ್ರಾಮೀಣ ನೃತ್ಯಗಳತ್ತ ಒಲಿಯುತ್ತಿದೆ ಎನ್ನಲಾಗಿದೆ.
ಪೌರಸ್ತ್ಯ ನೃತ್ಯ

	ಭಾರತೀಯ ನೃತ್ಯಕಲೆ: ಪೌರಸ್ತ್ಯ ನೃತ್ಯಕಲೆ ಪ್ರಪಂಚದಲ್ಲೇ ಅತಿ ಪ್ರಾಚೀನವಾದುದೆಂದು ಪರಿಗಣಿಸಲಾಗಿದೆ. ದೇವಾನುದೇವತೆಗಳಿಂದ ಅದು ಪ್ರಚುರಗೊಂಡಿತೆಂದು ನಂಬಿಕೆ. ಅದರಲ್ಲೂ ಭಾರತದ ನೃತ್ಯಕಲೆ ತೀರ ಪ್ರಾಚೀನವಾಗಿರುವುದಲ್ಲದೆ ಅದರ ಪ್ರಭಾವ ಜಾವ, ಬಾಲಿ, ಕಾಂಬೋಡಿಯ ಮತ್ತು ಜಪಾನುಗಳ ಮೇಲೆ ಆದುದಕ್ಕೆ ದಾಖಲೆಗಳಿವೆ. ರಾಮಾಯಣ ಮತ್ತು ಮಹಾಭಾರತಗಳು ಭಾರತದ ಭರತನಾಟ್ಯ, ಕಥಕಳಿ ಮತ್ತು ಜಾವದ ವೇಯಾಂಗ್ ನೃತ್ಯಗಳ ಮೂಲ ಕಥಾವಸ್ತುಗಳನ್ನು ಒದಗಿಸಿವೆ.

	ಪರಮೇಶ್ವರನನ್ನು ನಟರಾಜನೆಂದು ನಮ್ಮವರು ಕರೆದಿದ್ದಾರೆ. ಆತನಿಂದಲೆ ನಾಟ್ಯಶಾಸ್ತ್ರ, ನಾಟ್ಯ ಹುಟ್ಟಿದುವೆಂದು ಹೇಳಲಾಗಿದೆ. ಶಿವನ ತಾಂಡವ ಗಂಡು ನೃತ್ಯ. ಪಾರ್ವತಿಯ ಲಾಸ್ಯ ಹೆಣ್ಣು ನೃತ್ಯ.

	ಪುರಾತನ ಕಾಲದಲ್ಲಿ ಪ್ರಚಾರದಲ್ಲಿದ್ದ ನೃತ್ಯಕಲೆಯ ವೈವಿಧ್ಯವನ್ನು ಹಳೆಯ ಕಾವ್ಯಗಳಿಂದ ನಾಟ್ಯವನ್ನು ಕುರಿತ ಸಾಹಿತ್ಯದಿಂದ ತಿಳಿದುಕೊಳ್ಳಬಹುದು. ಅಲ್ಲದೆ ಭಾರತದ ದೇವಾಲಯಗಳಲ್ಲಿ ಕೆತ್ತಲ್ಪಟ್ಟ ಅನೇಕಾನೇಕ ಅದ್ಭುತವಾದ ನಾಟ್ಯವಿಗ್ರಹಗಳೂ ಕಲೆಯ ಆಳವನ್ನು ತಿಳಿಸುವುವು.

	ಚೋಳ ಚಕ್ರವರ್ತಿಗಳಲ್ಲಿ ಒಬ್ಬನಾದ ರಾಜ ರಾಜ ಚೋಳ ತಂಜಾವೂರಿನಲ್ಲಿರುವ ಶ್ರೀ ಬೃಹದೀಶ್ವರ ದೇವಾಲಯದಲ್ಲಿ ಪೂಜಾ ಸಮಯದಲ್ಲಿ ನರ್ತನಕ್ಕಾಗಿ 400ಕ್ಕಿಂತ ಹೆಚ್ಚು ಮಂದಿ ನರ್ತಕಿಯರ ವ್ಯವಸ್ಥೆ ಮಾಡಿಸಿದ್ದನಂತೆ. ಚಿದಂಬರಂ ದೇವಾಲಯದ 108 ಕಿರಣಗಳೂ ಮತ್ತು ನಟರಾಜನ ಹಲವಾರು ತಾಂಡವ ಭಂಗಿಗಳು ಈ ಹೇಳಿಕೆಗೆ ಪುಷ್ಟಿ ಕೊಡುತ್ತವೆ. ಹೊಯ್ಸಳರ ರಾಣಿ ಶಾಂತಲಾದೇವಿ ಬೇಲೂರು ದೇವಾಲಯದಲ್ಲಿ ನರ್ತಿಸುತ್ತಿದ್ದಳಂತೆ. ವಿಜಯನಗರದ ರಾಜರುಗಳು ಕೇರಳದ ಅರಸರುಗಳೂ ತಂಜಾವೂರು ಮಹಾರಾಷ್ಟ್ರಗಳ ರಾಜರುಗಳೂ ನೃತ್ಯಕಲೆಯನ್ನೂ ಸಂಗೀತಕಲೆಯನ್ನೂ ಪ್ರೋತ್ಸಾಹಿಸಿ ಪೋಷಿಸುತ್ತಿದ್ದರು. ಶಿವಾಜಿಯ ಹಿರಿಯಣ್ಣನಾದ ಸಾಂಬಾಜಿ ಕಲಾಭಿಮಾನಿಯಾಗಿದ್ದ.

	ಹತ್ತನೆಯ ಶತಮಾನದ ಪೂರ್ವದಲ್ಲಿ ರೂಢಿಯಲ್ಲಿದ್ದ ನೃತ್ಯಕಲೆ ಉಪರೂಪಕದ ರೂಪದಲ್ಲಿತ್ತು; ಅಥವಾ ನಾಟ್ಯಧರ್ಮಿ ಎಂದೆನಿಸಲ್ಪಟ್ಟು ಆಂಗಿಕಾಭಿನಯದಿಂದೊಳಗೂಡಿ ಮೈಕೈ ಚಲನೆಗಳಿಗೆ ಅರ್ಥಭಾವಗಳಿದ್ದು ಸಂಗೀತಮಯವಾಗಿತ್ತು. ಕಲೋದ್ಧಾರಕನಾದ ಭೋಜರಾಜ ಶೃಂಗಾರಪ್ರಕಾಶ ಎಂಬ ಗ್ರಂಥದಲ್ಲಿ ಹಲವು ಉಪರೂಪಕಗಳನ್ನು ತಿಳಿಸಿದ್ದಾನೆ. ದಾಮೋದರ ತನ್ನ ಸಂಗೀತದರ್ಪಣ ಎಂಬ ಗ್ರಂಥದಲ್ಲಿ ಮುಖಚವಿ, ಯತಿನೃತ್ತ, ಶಬ್ದಚರಿ, ಉಡುಪ, ಧ್ರುವ ಎಂಬ ನೃತ್ಯವಿಧಾನಗಳನ್ನು ಜಕ್ಕರಿ, ಬಹುರೂಪ ಪ್ರೇರಣೆ ಮತ್ತು ಗೊಂಡಲಿ ಎಂಬ ಸ್ತ್ರೀಯೊಬ್ಬಳು ನರ್ತಿಸುವ ಅಥವಾ ಕೆಲವೊಮ್ಮೆ ಪುರುಷನೂ ನರ್ತಿಸುವ ಅಭ್ಯಾಸಗಳನ್ನು ವಿವರಿಸಿದ್ದಾನೆ. ದೇವೇಂದ್ರನ ಸಂಗೀತಮುಕ್ತಾವಳಿ ಎಂಬ ಗ್ರಂಥದಲ್ಲಿ ಪುಷ್ಪಾಂಜಲಿ, ಮುಖಚವಿ, ಶುದ್ಧಯತಿ ನೃತ್ತ, ರಾಗಾನುರಾಗ-ಯತಿನೃತ್ತ, ಶಬ್ದನೃತ್ತ, ರೂಪನೃತ್ತ ಎಂಬ ಹಲವು ನೃತ್ಯಾಭಿನಯಗಳು ದ್ವದ, ಶಬ್ಧಚವಿ, ಶುದ್ಧಶಬ್ಧ, ಶುದ್ಧಗೀತ, ಗೀತಪ್ರಬಂಧ ಮುಂತಾದ ನೃತ್ಯಗೀತೆಗಳು ಚಿಂದು, ದರು, ದ್ರುಪದ ಎಂಬ ನೃತ್ಯಗಳು ವಿವರಿಸಲ್ಪಟ್ಟು ಆಧುನಿಕ ಭರತನಾಟ್ಯ ಪ್ರದರ್ಶನದ ಕಾರ್ಯಕ್ರಮಕ್ಕೆ ತಳಹದಿಯನ್ನು ಹಾಕಿದಂತಿದೆ.

	ದಕ್ಷಿಣ ದೇಶದ ಭರತನಾಟ್ಯದ ವಿಷಯ ಭರತನ ನಾಟ್ಯಶಾಸ್ತ್ರದಲ್ಲಿ ಬರುತ್ತದೆ. ಸೃಷ್ಟಿಕರ್ತನಾದ ಬ್ರಹ್ಮನೇ ಆತನಿಗೆ ಈ ಶಾಸ್ತ್ರವನ್ನು ಉಪದೇಶ ಮಾಡಿದನಂತೆ. ಭರತನಾಟ್ಯವನ್ನು ಶಾಸ್ತ್ರೀಯ ನಾಟ್ಯವೆನ್ನುತ್ತಾರೆ. ಈ ನಾಟ್ಯವನ್ನು ಭರತಂ ಎಂದೂ ನಾಟ್ಯಂ ಎಂದು ದೇಶೀ ಅಟ್ಟಂ ಎಂದೂ ಸದಿರ್ ಎಂದೂ ಕರೆವುದಿದೆ. ಭರತನಾಟ್ಯಕ್ಕೆ ಇಂದು ತಮಿಳುನಾಡಿನ ತಂಜಾವೂರು ಮತ್ತು ಕಾಂಚೀಪುರಗಳು ಕೇಂದ್ರಗಳಾಗಿವೆ. ಪರ್ವಕಾಲದಲ್ಲಿ ದೇವದಾಸಿಯರು ದೇವಾಲಯಗಳಲ್ಲಿ ದೇವರೆದುರು ಭರತನಾಟ್ಯ ಪ್ರದರ್ಶನ ಮಾಡುತ್ತಿದ್ದರು. ಕ್ರಮೇಣ ಇದಕ್ಕೆ ರಾಜ ಮಹಾರಾಜರುಗಳ ಪ್ರೋತ್ಸಾಹ ದೊರಕಿತು. ಭರತನಾಟ್ಯದಲ್ಲಿ ಹಿಮ್ಮೇಳಕ್ಕೆ ತಾಳ, ನಾದಸ್ವರಗಳು ಮೃದಂಗ ಇರುತ್ತದೆ. ಸಂಗೀತ ಕರ್ನಾಟಕ ಸಂಗೀತ, ನಟ ಅಥವಾ ನಟಿ ಅನೇಕ ಮುದ್ರೆಗಳಿಂದ ಭಾವಾಭಿನಯ ಮಾಡುತ್ತಾಳೆ. ಹಿನ್ನೆಲೆಯಲ್ಲಿ ಹಾಡುಗಾರಿಕೆ ಇದ್ದರೆ ದೇವರನಾಮ ರೂಪದಲ್ಲಿರುತ್ತದೆ.

	ಭಾರತದ ಇನ್ನೊಂದು ಶಾಸ್ತ್ರೀಯ ನಾಟ್ಯವೆಂದರೆ ಕಥಕಳಿ. ಈ ನಾಟ್ಯದ ತವರೂರು ಕೇರಳ. ಕಥಕಳಿ ಎಂದರೆ ಕಥೆ ನಾಟಕ ಎಂದು ಅರ್ಥ. ಅದರಲ್ಲಿ ಸಂಗೀತ, ಕುಣಿತ, ಕಾವ್ಯ, ನಾಟಕ, ಹಾಸ್ಯ, ವ್ಯಂಗ್ಯ-ಎಲ್ಲ ಉಂಟು. ರಾಮನಟ್ಟಂ ಕೃಷ್ಣನಾಟ್ಟಂ ಮೊದಲಾದ ಹಳೆಯ ನಾಟಕ ಮಾದರಿಗಳಿಂದ ಕಥಕಳಿ ನಾಟ್ಯನಾಟಕ ನಿಧಾನವಾಗಿ ವಿಕಾಸಗೊಂಡು ಇಂದಿನ ರೂಪು ಪಡೆಯಿತು. ಇದರಲ್ಲಿ ಭಾಗವಹಿಸುವ ಪಾತ್ರಧಾರಿಗಳು ಬಗೆಬಗೆಯ ವರ್ಣರಂಜಿತ ಪೋಷಾಕುಗಳನ್ನು ಧರಿಸುತ್ತಾರೆ. ಮೊಗವಾಡ ಹಾಕಿದಂತೆ ಮುಖಕ್ಕೆ ಅಲಂಕಾರ ಮಾಡಿಕೊಳ್ಳುತ್ತಾರೆ. ಹೊಳೆವ ಕಿರೀಟ ಧರಿಸುತ್ತಾರೆ. ಸಾಂಪ್ರದಾಯಿಕ ಆಭರಣ ತೊಡುತ್ತಾರೆ. ಒಂದೊಂದು ಪಾತ್ರಕ್ಕೂ ಅದರದೇ ಆದ ಪೋಷಾಕು ಅಲಂಕರಣ ಉಂಟು. ಪಾತ್ರಧಾರಿಗಳೆಲ್ಲ ಗಂಡಸರೇ. ಹೆಣ್ಣುಪಾತ್ರಗಳನ್ನು ಎಳೆ ವಯಸ್ಸಿನ ಗಂಡುಮಕ್ಕಳೇ ನಿರ್ವಹಿಸುತ್ತಾರೆ. ಕಥಕ್ಕಳಿಗೆ ರಂಗಮಂಟಪ ಎಂಬುದೊಂದು ಇಲ್ಲ. ನೋಡಲು ಬಂದವರು ಕೂಡಲು ಕೆಲವು ಚಾಪೆಗಳನ್ನು ಹಾಸಿರುತ್ತಾರೆ, ಅಷ್ಟೆ. ಕಂಚಿನ ಒಂದೇ ಒಂದು ದೀಪದ ಕಂಬ ಬೆಳಕನ್ನು ಒದಗಿಸುತ್ತದೆ. ಹಿನ್ನೆಲೆಯಲ್ಲಿ ಹಾಡಲು ಇಬ್ಬರಿರುತ್ತಾರೆ. ಅಗತ್ಯವಾದ ವಾದ್ಯವೆಂದರೆ ಚಂಡೆ. ಒಂದು ಲೋಹದ ಗಂಟೆ, ಒಂದು ಜೊತೆ ಕಂಚಿನ ತಾಳ, ಒಂದು ಡ್ರಮ್ಮು ಇರುವುದೂ ಉಂಟು.

	ಇನ್ನೊಂದು ಶಾಸ್ತ್ರೀಯ ನಾಟ್ಯ ಮಣಿಪುರಿ ಎಂಬುದಕ್ಕೆ ತವರೂರು ಮಣಿಪುರ. ಆ ಪ್ರದೇಶದ ಸ್ಥಳೀಯ ಜನಪದ ನೃತ್ಯಗಳಿಂದ ಈ ನಾಟ್ಯಪದ್ಧತಿ ವಿಕಾಸಗೊಂಡಿದೆ. ಲಾಯ್ ಹರೋಬ ಎಂಬುದು ಮಣಿಪುರದ ಆದ್ಯಂತ ಇದ್ದ ಅಂಥ ಪ್ರಾಚೀನ, ಜನಪದ ನೃತ್ಯನಾಟಕ. ಮಣಿಪುರಿ ನೃತ್ಯದ ವೈಶಿಷ್ಟ್ಯವೆಂದರೆ ಅದರ ರಮ್ಯತನ ಮಾರ್ದವ. ಹೆಣ್ಣುಪಾತ್ರಗಳ ಉಡಿಗೆಗಳಂತೂ ತುಂಬ ಸುಂದರವೂ, ನಯ, ಮನೋಹರವೂ ಆಗಿರುತ್ತವೆ. ಹಿನ್ನೆಲೆಯಲ್ಲಿ ಹಾಡುವವರಿರುತ್ತಾರೆ. ಖೋಲ್ ಮಂಜೀರ, ಕೊಳಲು-ಇವು ಬಳಕೆಯಲ್ಲಿರುವ ವಾದ್ಯಗಳು.

	ಕಥಕ್ ಎಂಬುದು ಉತ್ತರ ಭಾರತದ ನಾಟ್ಯ. ಕಥಕ್ ಎಂದರೆ ಕಥೆ ಹೇಳುವವನು ಎಂದರ್ಥ. ಹಿಂದೆ ಕಥೆಗಾರನೊಬ್ಬ ಮಹಾಕಾವ್ಯಗಳ ಪ್ರಸಂಗಗಳನ್ನು ಆಯ್ದುಕೊಂಡು ಅಭಿನಯಪೂರ್ವಕ ಕಥೆ ಹೇಳುತ್ತಿದ್ದ. ಕ್ರಮೇಣ ಅದೇ ಕಥಕ್ ನೃತ್ಯವಾಯಿತು.

	ಕೆಲಕಾಲಾನಂತರ ಪರ್ಷಿಯನ್ನರ ಪ್ರಭಾವದಿಂದಾಗಿ ಕಥಕ್‍ನಲ್ಲಿ ಕೆಲವು ಮಾರ್ಪಾಟುಗಳಾದವು. ಅದು ತನ್ನ ಧಾರ್ಮಿಕ ನೈತಿಕ ಧೋರಣೆಗಳನ್ನು ಕ್ರಮೇಣ ಕಳೆದುಕೊಂಡು ರಾಜಾಸ್ಥಾನದ ನೃತ್ಯವಾಯಿತು. ಗಂಡಸರು ಹೆಂಗಸರು ಇಬ್ಬರೂ ಭಾಗವಹಿಸಲು ಪ್ರಾರಂಭಿಸಿದರು. ಕಾಲ ಕಳೆದಂತೆಲ್ಲ ಕಥಕ್ ಎಂದರೆ ಕೇವಲ ಮನೋರಂಜನೆಯ ಕಾರ್ಯಕ್ರಮ ಎಂಬಂತಾಯಿತು. ಅದರಲ್ಲಿನ ಕಲಾಭಾಗ ಕಡಿಮೆ ಆಯಿತು.

	ಕಥಕ್ ನೃತ್ಯಕ್ಕೆ ಪ್ರೋತ್ಸಾಹ ಕೊಟ್ಟವರು ಲಖ್‍ನೌ ಮತ್ತು ಜೈಪುರದ ಅರಸರು. ಇದರಿಂದಾಗಿ ಕಥಕ್‍ನಲ್ಲಿ ಲಖ್‍ನೌ ಘರಾಣ ಮತ್ತು ಜೈಪುರ್ ಘರಾಣ ಎಂಬ ಎರಡು ಪಂಥಗಳಾದವು.

	ಕಥಕ್‍ನಲ್ಲಿ ಪಾದವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯ. ನೃತ್ಯಕಾರ ನಾಲ್ಕಾರು ಸುತ್ತು ಗೆಜ್ಜೆ ಕಟ್ಟಿಕೊಂಡಿರುತ್ತಾನೆ. ಹಿಮ್ಮೇಳ ಹಾಡುವುದರ ಜೊತೆಗೆ ತಬಲದ ಶಬ್ದಗಳನ್ನು ಬಾಯಲ್ಲಿ ಉಚ್ಚರಿಸುತ್ತಾನೆ. ಪಕ್ಕವಾದ್ಯಗಳಲ್ಲಿ ಸಾರಂಗಿ ಎಂಬ ತಂತೀವಾದ್ಯವಿರುತ್ತದೆ.

	ಒಡಿಸ್ಸಿ ನೃತ್ಯ: ಇತ್ತೀಚೆಗೆ, ಅಂದರೆ ಕೇವಲ 10-15 ವರ್ಷಗಳಿಂದ ಈಚೆಗೆ-ಒರಿಸ್ಸದ ನಾಟ್ಯಾಚಾರ್ಯ ಶ್ರೀ ಕವಿಚಂದ್ರ ಕಾಳೀಚರಣ ಪಟ್ನಾಯಕನ ಎಡೆಬಿಡದ ಪ್ರಯತ್ನಗಳ ಫಲವಾಗಿ ಒಡಿಸ್ಸಿ ನೃತ್ಯವೂ ನಮ್ಮ ಶಾಸ್ತ್ರೀಯ ಸಂಪ್ರದಾಯಕ್ಕೆ ಸೇರಿತು. ಇದು ಭರತನಾಟ್ಯವನ್ನು ಹೋಲುತ್ತದೆ. ಹಿಂದೂ ದೇಶದ ಇತರ ಶಾಸ್ತ್ರೀಯ ಕಲೆಗಳಂತೆ ಒಡಿಸ್ಸಿ ನೃತ್ಯವೂ ಒರಿಸ್ಸಾ ರಾಜ್ಯದ ಅರಸ ಅರಸಿಯರಿಂದಲೂ ರಾಜಮನೆತನದವರಿಂದಲೂ ಪ್ರೋತ್ಸಾಹ ಪಡೆದು ಪ್ರದರ್ಶಿತವಾಗುತ್ತಿತ್ತು. ಈ ನೃತ್ಯಸಂಪ್ರದಾಯ ಶಾಶ್ವತವಾಗಿರಲೆಂದು ಅವರು ಭುವನೇಶ್ವರದ ಪ್ರಖ್ಯಾತವಾದ ಲಿಂಗರಾಜ ದೇವಾಲಯದಲ್ಲಿ ಸೊಗಸಾದ ನೃತ್ಯಶಿಲ್ಪಗಳನ್ನು ಕೆತ್ತಿ ಕಲೆಗೆ ಅಮರತೆಯನ್ನು ಒದಗಿಸಿದ್ದಾರೆ. ಇಂಥ ನೃತ್ಯವಿಗ್ರಹಗಳು ಕೋಣಾರ್ಕದಲ್ಲಿನ ಸೂರ್ಯ ದೇವಾಲಯದಲ್ಲೂ, ಪುರಿಯ ಜಗನ್ನಾಥ ಮಂದಿರದಲ್ಲೂ ಶಾಶ್ವತವಾಗಿ ಉಳಿದುಕೊಂಡು ಬಂದಿದೆ.

	ಜನಪದ ನೃತ್ಯಗಳು: ಉತ್ತರದ ಕಾಶ್ಮೀರಿನಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಪಶ್ಚಿಮದ ಸೌರಾಷ್ಟ್ರ, ಮಹಾರಾಷ್ಟ್ರದಿಂದ ಇತ್ತ ಪೂರ್ವದ ಮಣಿಪುರ ದೇಶದವರೆಗೆ ಹಳ್ಳಿಹಳ್ಳಿಗಳಲ್ಲಿನ ಜನತೆ ಸ್ವಾಭಾವಿಕವಾದ ಎಲ್ಲ ಉಲ್ಲಾಸದಿಂದ ಜನಪದ ನೃತ್ಯಗಳ ಮೂಲಕ ತಮ್ಮ ಮನೋಭಾವವನ್ನು ವ್ಯಕ್ತಪಡಿಸುತ್ತಾರೆ. ಅವನ್ನು ಈ ರೀತಿಯಾಗಿ ವಿಭಾಗಿಸಬಹುದು:
ಧಾರ್ಮಿಕ ಉತ್ಸವಗಳಲ್ಲೂ ಸಾಮಾಜಿಕ ಸಂದರ್ಭಗಳಲ್ಲೂ ಮಾಡುವ ಸಾಮೂಹಿಕ ನೃತ್ಯಗಳು.
ಕೆಲವು ಮನೆತನದವರು ಸಾಂಪ್ರದಾಯಿಕವಾಗಿ, ಪರಂಪರೆಯಾಗಿ ಜನನ, ಮದುವೆ ಉತ್ಸವಗಳಲ್ಲಿ ಮಾಡುವ ಔದ್ಯೋಗಿಕ 

	ನೃತ್ಯಗಳು.

ಅನಾಗರಿಕ ಜನರು ತಮ್ಮದೇ ಆದ ನಂಬಿಕೆಗಳ ಆಧಾರದ ಮೇಲೆ ಮಾಡುವ ನೃತ್ಯಗಳು.
ಕಾಳಗವನ್ನು ಹೋಲುವ ನೃತ್ಯವನ್ನು ನರ್ತಿಸಿ ಯೋಧರ ಧೈರ್ಯ ಪರಾಕ್ರಮಗಳನ್ನು ವರ್ಣಿಸುವ ಕ್ಷಾತ್ರ ನೃತ್ಯಗಳು.

	ಇವುಗಳ ವಿವರಗಳು ಈ ಲೇಖನದ ಮೊದಲ ಭಾಗದಲ್ಲಿ ಆಗಲೆ ಬಂದಿವೆ.      (ಯು.ಎಸ್.ಕೆ.)

	ಜಾವ, ಶ್ರೀಲಂಕಾ ಮತ್ತು ಜಪಾನ್ ನೃತ್ಯಗಳು: ಜಾವದ ವೇಯಂಗ್ ನೃತ್ಯಕ್ಕೆ ಭಾರತದ ದೇವಾಲಯಗಳ ನೃತ್ಯಗಳೇ ಮಾದರಿಗಳಾದುವೆಂಬ ವಿಷಯವನ್ನು ಆಗಲೇ ನೋಡಿದ್ದೇವೆ. ಜಾವದ ನೃತ್ಯಗಳೆಲ್ಲ ಜನಸಾಮಾನ್ಯರಿಗೆ ನೋಡಲು ದೊರೆಯುವುದಿಲ್ಲ. ಏಕೆಂದರೆ ಉತ್ತಮ ನೃತ್ಯಗಳೆಲ್ಲ ನಡೆಯುವುದು ರಾಜಾಸ್ಥಾನಗಳಲ್ಲಿ ಮತ್ತು ಶ್ರೀಮಂತರ ಗೃಹಗಳಲ್ಲಿ. ಆ ನೃತ್ಯಕ್ಕೆ ಬೇಕಾದ ಜನರನ್ನು ಅರಸು ಮನೆತನದ ಹೆಣ್ಣುಮಕ್ಕಳಿಂದ ಆಯ್ಕೆಮಾಡಲಾಗುತ್ತದೆ. ಅವರ ನೃತ್ಯ ಕೇವಲ ಕೆಲವರಿಗಾಗಿ ಮಾತ್ರ. ಜನಸಾಮಾನ್ಯರು ನಡೆಸುವ ನೃತ್ಯ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರೇ ಭಾಗವಹಿಸುತ್ತಾರೆ. ವೇಯಂಗ್ ನೃತ್ಯ ಸಾರ್ವಜನಿಕವಾದುದು. ಎಷ್ಟೇ ಕಲಾಪೂರ್ಣವಾಗಿದ್ದರೂ ಇದಕ್ಕೆ ರಾಜಾಸ್ಥಾನದ ನೃತ್ಯಗಳ ಸ್ಥಾನಮಾನ ಸಿಕ್ಕಿಲ್ಲ. ಬರ್ಮದಲ್ಲಿ ನೃತ್ಯಕಾರರು ಹೊಲಗಳ ಹೊರವಲಯದಲ್ಲಿ ನಿರ್ಮಿತವಾದ ವೇದಿಕೆಯೊಂದರ ಮೇಲೆ ನಿಂತು ಕುಣಿಯುತ್ತಾರೆ. ಜಪಾನಿನ ನೃತ್ಯಗಳು ಮಾತ್ರ ಎಲ್ಲ ಪ್ರೇಕ್ಷಕರಿಗೂ ಲಭ್ಯ.

	ಪಾಶ್ಚಾತ್ಯ ಹಾಗೂ ಪೌರಾಸ್ತ್ಯ ನೃತ್ಯಗಳ ನಡುವಣ ವ್ಯತ್ಯಾಸವನ್ನು ಸುಲಭದಲ್ಲಿ ವಿವರಿಸಲು ಆಗುವುದಿಲ್ಲ. ಒಂದು ಮಾತಂತೂ ಸತ್ಯ. ಪಾಶ್ಚಾತ್ಯ ನೃತ್ಯ ಪೌರಸ್ತ್ಯರ ಕಣ್ಣಿಗೆ ದೊಂಬರಾಟವಾಗಿ ಕಾಣಬಹುದು. ಅಂತೆಯೇ ಪೌರಸ್ತ್ಯ ನೃತ್ಯಭಂಗಿಗಳನ್ನು ವೀಕ್ಷಿಸುವ ಪಾಶ್ಚಾತ್ಯರಿಗೆ ಅವೆಲ್ಲ ಪರಕೀಯ ಎನಿಸಬಹುದು. 

	ಜಪಾನೀ ನೃತ್ಯದ ನಡಿಗೆಯ ವಿಧಾನವನ್ನು ಸ್ವಲ್ಪ ಮಾರ್ಪಾಡುಗಳೊಂದಿಗೆ ಶ್ರೀಲಂಕಾದ ಕಾಂದ್ಯಾನ್ ನೃತ್ಯ ಅನುಸರಿಸಿದೆ. ಕಾಲುಕೈಗಳ ಬಾಗು, ನಡೆ ಮೊದಲಾದವುಗಳ ದೃಷ್ಟಿಯಿಂದ ಭಾರತೀಯ, ಬರ್ಮೀ, ಕಾಂಬೋಡಿಯನ್, ಜಾವಾನೀಸ್, ಬಾಲೀ, ಶ್ರೀಲಂಕಾ ಮತ್ತು ಜಪಾನೀ ಶೈಲಿಗಳಲ್ಲಿ ತುಂಬ ಸಾಮ್ಯ ಉಂಟು. ಕಾಂದ್ಯಾನ್ ನೃತ್ಯ ಭಾರತೀಯ ಹಾಗೂ ಜಪಾನೀ ನೃತ್ಯಗಳಿಗಿಂತ ಅಷ್ಟು ಸೂಕ್ಷ್ಮವಲ್ಲದಿದ್ದರೂ ಶಕ್ತಿಯುತವಾದದ್ದು. ಕಾಲುಗಳನ್ನು ಸಾಕಷ್ಟು ವಿರಳವಾಗಿ ಬಾಗಿಸಿ ನಿಲ್ಲುವುದು ಈ ನೃತ್ಯದ ಒಂದು ವೈಶಿಷ್ಟ್ಯ. ಶ್ರೀಲಂಕಾದ ವಣ್ಣಂ ನೃತ್ಯಗಳು ಪಶುಪ್ರಾಣಿಗಳ ಹಾವು ಹಕ್ಕಿಗಳ ಐತಿಹ್ಯವನ್ನು ಪ್ರದರ್ಶಿಸುತ್ತವೆ. ವಿಶಿಷ್ಟ ಮುಖವಾಡವನ್ನಾಗಲಿ ಪೋಷಾಕುಗಳನ್ನಾಗಲೀ ಬಳಸದಿದ್ದರೂ ನಟರು ಆಯಾ ಪ್ರಾಣಿಯ ರೀತಿನೀತಿಗಳನ್ನು ಚೆನ್ನಾಗಿ ಅನುಕರಿಸುತ್ತಾರೆ.

	ಜಪಾನೀಗಳು ತಮ್ಮ ನೃತ್ಯದ ಮೂಲವನ್ನು ಆನಂದ ದೇವತೆಗೆ ಅಂಟಿಸಿದ್ದಾರೆ. ಗುಹೆ ಸೇರಿದ ಸೂರ್ಯನನ್ನು ಒಲಿಸಿ ಹೊರತಂದು ಲೋಕಕ್ಕೆ ಬೆಳಕು ಕೊಡಲು ಆಕೆ ನೃತ್ಯ ಮಾಡಿದಳಂತೆ. ಈ ಸಂಗತಿಯನ್ನು ದೇವಾಲಯಗಳಲ್ಲಿನ ಕಗೂರ ನೃತ್ಯಗಳು ನಟಿಸಿ ತೋರಿಸುತ್ತವೆ. ದೇವಾಲಯಗಳಲ್ಲಿ ಅರಮನೆಗಳಲ್ಲಿ ಮಾತ್ರ ನೃತ್ಯಗಳಾಗುತ್ತಿದ್ದಾಗ ಒಬ್ಬ ನೃತ್ಯಗಾತಿ ಓಡಿ ಹೊರಬಂದು ಸಾರ್ವಜನಿಕರೆದುರು ಕುಣಿದಳಂತೆ. ಅಂದಿನಿಂದ ಎಂದರೆ 17ನೆಯ ಶತಮಾನದಿಂದ ಸಾರ್ವಜನಿಕ ರಂಗ ಮಂದಿರಗಳು (ಅವನ್ನು ಕಬೂಕಿ ಎನ್ನುತ್ತಾರೆ) ರೂಢಿಗೆ ಬಂದವು. 14ನೆಯ ಶತಮಾನದಲ್ಲಿ ಬೌದ್ಧ ಭಿಕ್ಷುಗಳಿಂದ ಪ್ರಚಾರಗೊಂಡ ನೋ ನಾಟಕಗಳಲ್ಲೂ ನೃತ್ಯಗಳುಂಟು. ಇಲ್ಲಿನ ನೃತ್ಯಗಳು ಸಾಂಕೇತಿಕ. ಹಾವಭಾವ ನಟನೆಗಳು ಸ್ವಲ್ಪ. ಆದ್ದರಿಂದ ಇದನ್ನು ಅರ್ಥೈಸಲು ಸಾಕಷ್ಟು ಸಿದ್ಧತೆ ಅಗತ್ಯ. ಆದರೆ ಕಬೂಕಿ ನೃತ್ಯಗಳು ನೈಜ. ಹಾವಭಾವಗಳನ್ನು ಭಾಷೆ ತಿಳಿಯದವರೂ ಅರ್ಥಮಾಡಿಕೊಳ್ಳಬಲ್ಲರು. ನೃತ್ಯ ನಡೆಯುವುದು ಮೆರುಗು ಕೊಟ್ಟ ನೆಲದ ಮೇಲೆ. ನೃತ್ಯಗಾರರು ಕಾಲುಚೀಲ(ತಾಬಿ) ಧರಿಸುತ್ತಾರೆ. ಇತರ ಪೌರಸ್ತ್ಯ ದೇಶಗಳವರು ಬರಿಗಾಲಲ್ಲಿ ನೃತ್ಯ ಮಾಡುತ್ತಾರೆ. ಮುಖ ಯಾವ ಭಾವವನ್ನು ಸೂಚಿಸುವಂತಿರುವುದಿಲ್ಲ. ಆದರೆ ತಲೆಯ ತೊನೆದಾಟ ಆಗಾಗಿನ ಭಾವ ಮುಗಿದದ್ದನ್ನು ಸೂಚಿಸುವಂತಿರುತ್ತದೆ. ಮೂಕನೃತ್ಯಕ್ಕೆ ಕಳೆಗಟ್ಟಿಸಲು ವಿಶಿಷ್ಟವಾದ ಬೀಸಣಿಗೆಗಳಂಥ ಸಾಧನಗಳನ್ನು ಬಳಸಲಾಗುತ್ತದೆ. ಗೀಷ ನೃತ್ಯಗಾತಿಯರು ಬಲು ನವುರಾಗಿ ಕುಣಿಯುತ್ತಾರಲ್ಲದೆ ಅವರ ನೃತ್ಯಕಲೆ ಶ್ರೀಮಂತರನ್ನು ಹೇಗೋ ಹಾಗೆ ಜನಸಾಮಾನ್ಯರನ್ನೂ ಆಕರ್ಷಿಸಿದೆ.											*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ